Friday, June 17, 2011

ಊಟಕ್ಕೆ ಬನ್ನಿ

(01/05/2011 ಬೆಂಗಳೂರಿನಿಂದ  ಉಡುಪಿಯ ಹತ್ತಿರ ನನ್ನ ಉನ್ನತ ಅಧಿಕಾರಿಯ ಊರು ಬಗ್ಗತೋಟ ಎಂಬಲ್ಲಿ ದರ್ಮಜಾರುಂದಾಯ ಎಂಬ ದೈವದ ಕೋಲ ಕಾರ್ಯಕ್ರಮಕ್ಕೆ ಹೋಗಿದ್ದು  ಮೂರನೇ ತಾರೀಖು ಉಡುಪಿಯ ಕೃಷ್ಣ ಮಠ ದಲ್ಲಿ ದೇವರ ದರ್ಶನ ಮಾಡಿ ಅನ್ನಪ್ರಸಾದವನ್ನು ಸ್ವೀಕರಿಸಿ ಬಂದೆ, ಅದು ಹೇಗಿತ್ತು ಅನ್ನುವುದರ ಕಿರುಪರಿಚಯವೇ ಈ ಒಂದು ಸಣ್ಣ ಬರಹ.)
ಪ್ರೀತಿಯ ಗೆಳೆಯರೇ,
          
ಬನ್ನಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಈಗಿನ ಪರ್ಯಾಯ  ಶಿರೂರು ಶ್ರೀಗಳೊಂದಿಗೆ ಅಮೃತ ಭೋಜನ ಸವಿಯೋಣ .
   ಮೊದಲಿಗೆ ಶ್ರೀಕೃಷ್ಣನ ದರ್ಶನ,ತೀರ್ಥ, ಶ್ರೀಗಂಧ ಮತ್ತು ಹೂ ಪ್ರಸಾದ ಸ್ವೀಕರಿಸಿದ ನಂತರ ಪ್ರಾಕಾರದಲ್ಲಿ ಬಲಕ್ಕೆ ತಿರುಗಿ ಅಲ್ಲೇ ಎಡಕ್ಕೆ ಓಣಿಯಲ್ಲಿ ಮುಂದೆ ಪಾಕಶಾಲೆ ದಾಟಿ ಹೊರಟರೆ ಸಿಗುವುದೇ ಭೋಜನಶಾಲೆ.  ಸುಮಾರು ಮುನ್ನೂರು ಜನ ಒಟ್ಟಿಗೆ ಕೂರಬಹುದು. ಎಡಗಡೆ ಹದಿನೈದು ಅಡಿ ಬಿಟ್ಟು ಕಟ್ಟಿರುವ ಒಂದು ಕಟ್ಟೆ ಸಮಕೋನಕ್ಕೆ ಎತ್ತರ ಎರಡು ಅಡಿ. ಆ ಜಾಗದಲ್ಲಿ ಮೂರು ಆಸನಗಳಿವೆ. ಹಿಂದಿನ, ಈಗಿನ ಮತ್ತು  ಮುಂದಿನ  ಪರ್ಯಾಯ ಶ್ರೀಗಳು ಊಟ ಮಾಡಲಿಕ್ಕೆ, ಈಗಿರುವವರು ಶಿರೂರು ಶ್ರೀಗಳು.
    
ಎಲ್ಲರೂ ಸಾಲು ಸಾಲಾಗಿ ಕುಳಿತ ಮೇಲೆ ಎಲೆ ಹಾಕುತ್ತಿದ್ದಾರೆ. ಅಲ್ಲಿನ ಬಾಳೆ ಎಲೆಗಳೇ ವಿಶೇಷ  ಇಲ್ಲಿನ  ವಿಳೇದೆಲೆಗಳಾದ ಅಂಬಾಡಿ ಅಥವಾ ಮೈಸೂರಿನ ಎಲೆಗಳ ಹಾಗೆ ತಿಳಿಹಸಿರು  ಹಾಗು  ತೊಳೆದರೆ ಸೀಳುವಂತದಲ್ಲ, ಬದಲಾಗಿ ನಾಟಿ ಎಲೆಯಂತೆ ಗಾಡ ಹಸಿರು ಬಣ್ಣದಿಂದ ಕೂಡಿದ್ದು ಮಂದವಾಗಿಯೂ ಇದೆ. ಕೆಲವು ಹಳದಿ ಮತ್ತು ಕಂದುಬಣ್ಣದ ಹಣ್ಣೆಲೆಗಳು.
ಎಲೆ ಸ್ವಚ ಮಾಡಲು ನೀರು ಹಾಕುತ್ತಿದ್ದಾರೆ  ಎಲೆ ಸ್ವಚ್ಛ ವಾಯಿತು.
    
ಈಗ ಶ್ರೀಗಳ ಆಗಮನ ಎಲ್ಲರು ಎದ್ದು ನಿಂತಿದ್ದೇವೆ ಶ್ರೀಗಳು ಎಲ್ಲರಿಗೂ ತೀರ್ಥ ಹಾಕುತ್ತ ಬರುತ್ತಿದ್ದಾರೆ ತೀರ್ಥದಲ್ಲಿ ಪಚ್ಚಕರ್ಪೂರದ ಪರಿಮಳ . ನಂತರ ಶ್ರೀಗಳು ಅವರಿಗೆ ಬಡಿಸಿದ್ದ ಎಲೆಯ ಮುಂದೆ ಆಸೀನರಾಗಿದ್ದಾರೆ .
   
ಎಲೆಯ  ಎಡ ಮೂಲೆಯ ಮೇಲ್ಗಡೆಯಿಂದ ಉಪ್ಪು, ಮಿಡಿಮಾವಿನ ಉಪ್ಪಿನಕಾಯಿಹೆಸರುಬೇಳೆ ಕಡಲೆಬೇಳೆ ಕೋಸಂಬರಿ, ಕಡಲೆಬೇಳೆ ಗಟ್ಟಿ ಚಟ್ನಿ, ಪಡವಲಕಾಯಿ ಪಲ್ಯ, ಅದರ ಕೆಳಗೆ ಹಾಗಲಕಾಯಿ ಪಲ್ಯ, ಎಲೆಯ ಕೆಳ ಬಲಗಡೆ ಮೂಲೆಯಲ್ಲಿ ಹಯಗ್ರೀವ. ಉಪ್ಪಿನ ಕೆಳಗೆ ಕಾಯಿಸಾಸಿವೆ ಚಿತ್ರಾನ್ನ. ಎಡಕ್ಕೆ ಶ್ರೀಕೃಷ್ಣನಿಗೆ ಸಮರ್ಪಿಸಿದ್ದ ದೋಸೆ, ಆಂಬೋಡೆ, ಚಕ್ಕುಲಿ, ಕೋಡುಬಳೆ, ಸಜ್ಜಪ್ಪ, ರವೆ ಉಂಡೆ ಮುಂತಾದ ತಿಂಡಿಯ ಚೂರುಗಳು ಒಂದು ಹಿಡಿಯಷ್ಟುಬಾಳೆಹಣ್ಣು ಕಿತ್ತಳೆ ಹಣ್ಣು, ಹುರಿದ ಎಳ್ಳು ಗಸಗಸೆ ಕೊಬ್ಬರಿ ಬೆಲ್ಲದ ಪುಡಿ. ಚಿತ್ರಾನ್ನದ ಬಲಕ್ಕೆ ಮದ್ಯದಲ್ಲಿ ಅನ್ನ, ಅನ್ನದ ಪಕ್ಕದಲ್ಲಿ ಹಸಿಯಳ್ಳೆಚಟ್ನಿಯ ಕೆಳಗೆ ಹುಣಿಸೆಗೊಜ್ಜು .
 
ಈಗ ಊಟ ಪ್ರಾರಂಭ ಮಾಡೋಣ ಮೊದಲು ಹಯಗ್ರೀವ. ಕಡಲೆಬೇಳೆ, ಬೆಲ್ಲ, ತುಪ್ಪ, ಕೊಬ್ಬರಿಯಿಂದ ಮಾಡಿದ ಏಲಕ್ಕಿಪುಡಿ ಬೆರೆಸಿದ ಸಿಹಿ, ಹಯಗ್ರೀವ ತಿಂದ ಮೇಲಂತು ಅಮೃತ ತಿಂದಹಾಗಾಯಿತು.
ನಂತರ ತಂಬುಳಿ. ಮಜ್ಜಿಗೆಗೆ ಹಸಿ ಜೀರಿಗೆ ಹಸಿಮೆಣಸಿನಕಾಯಿ ಕೊತ್ತಂಬರಿಸೊಪ್ಪು ಹುರಿಗಡಲೆ ಕೊಬ್ಬರಿ ರುಬ್ಬಿ ಬೆರೆಸಿ
ಹಿಂಗು ಸಾಸಿವೆ ಒಗ್ಗರಣೆ ಕೊಟ್ಟಿದ್ದು . 
ಅನ್ನದೊಂದಿಗೆ ಕಲಸಿ ತಿಂದನಂತರ ತಿಳಿಸಾರು ಬಡಸಿದರು ಹುಣಿಸೆಉಳಿ,ಹದವಾದ ಕಾರ, ಕೊಬ್ಬರಿ,ಬೆಲ್ಲ,ಹಿಂಗಿನ ಸಮ್ಮಿಲನ. ಅದ್ಬುತ ರುಚಿ.
ಒಬ್ಬರು ಎಲ್ಲರಿಗೂ ತೀರ್ಥ ಹಾಕುತ್ತ ಬಂದರು ಶ್ರೀಕೃಷ್ಣನಿಗೆ ನೈವೆಧ್ಯಕ್ಕೆ ಇಟ್ಟಿದ್ದ ಸಕ್ಕರೆನೀರು.
ಆಮೇಲೆ ಅನ್ನ ಬಂತು ದಪ್ಪಹೋಳಿನ ಮಂಗಳೂರ್  ಸೌತೆಕಾಯಿಯ ಹುಳಿ  ಉದ್ದು, ದನಿಯ, ಕೊಬ್ಬರಿ, ಒಣ ಮೆಣಸು, ಜೀರಿಗೆ ಮುಂತಾದ ಪದಾರ್ಥ ಹಾಕಿ ಮಾಡಿದ್ದ  ಸ್ವಲ್ಪ ಬೆಲ್ಲ ಮುಂದಿದ್ದ ಹುಳಿಯ ರುಚಿಯಂತು ತಿಂದವರೇ ಹೇಳಬೇಕು.
ಕಾಯಿಸಾಸಿವೆ ಚಿತ್ರಾನ್ನ ಬಾಯಿ ಚಪ್ಪರಿಸುವಂತೆ ಇತ್ತು.
 ಉದ್ದಿನಬೇಳೆ ಕಡಲೆಬೇಳೆ ಬೆರೆಸಿ ಮಾಡಿದ್ದ ಆಂಬೋಡೆ ಕಟುಕಲು ಕಟುಕಲಾಗಿ ಇತ್ತು.
   ಪಡವಲಕಾಯಿ ಕೊಬ್ಬರಿ ಹಸಿಮೆಣಸು ಹಿಂಗು  ಸ್ವಲ್ಪ ಬೆಲ್ಲ ಹಾಕಿದ್ದ ಪಲ್ಯ, ಅದೇ ತರ ಹಾಗಲಕಾಯಿ ಹೆಚ್ಹಿ ಉಳಿ ಉಪ್ಪು ಬೆಲ್ಲದೊಂದಿಗೆ ಬೇಯಿಸಿ ಹಸಿಮೆಣಸು ಕೊಬ್ಬರಿ ಸಾಸಿವೆ ರುಬ್ಬಿ ಒಗ್ಗರಣೆ ಕೊಟ್ಟಿದ್ದ ಪಲ್ಯ WOW  ಅನ್ನುವಂತಿತ್ತು.
ಮಂಗಳೂರ್  ಸೌತೆಕಾಯಿಯ ಹುಳಿಯನ್ನ ತಿಂದನಂತರ ಬಂದಿದ್ದು ತೆಳ್ಳಗೆ ಹೆಚ್ಚಿದ್ದ ಬೂದಗುಂಬಳಕಾಯಿ ಮಜ್ಜಿಗೆಹುಳಿ.
  ಆಮೇಲೆ ಬಂತು ನೋಡಿ ಮೆತ್ತಗಿನ ಅಚ್ಹ ಬಿಳಿ ಬಣ್ಣದ ಕೊಬ್ಬರಿ ಮಿಠಾಯಿ ಅದರಲ್ಲಿದ್ದ ಏಲಕ್ಕಿ,ಪಚ್ಚಕರ್ಪೂರದ ಪರಿಮಳ ಗಮಗಮ ಹದವಾದ ಸಿಹಿ ಅದ್ಬುತ ರುಚಿ .
  ಅರೆ ಮತ್ತೊಂದು ಸಿಹಿ ಅದರ ಹೆಸರು ಮೋಹನಲಾಡು ನೋಡಲು ಲಾಡುವಿನದ್ದೇ ಬಣ್ಣ ರುಚಿ ಆದರೆ ಚಿರೋಟಿರವೆ ಮೈದಾ ಕಲಸಿ ಪೂರಿತರ ಎಣ್ಣೆಯಲ್ಲಿ ಕರೆದು ಪುಡಿಮಾಡಿ (flakes) ಸಕ್ಕರೆ ಕ್ಷೀರದಲ್ಲಿ  ನೆನೆಸಿ ದ್ರಾಕ್ಷಿ ಗೋಡಂಬಿ ಏಲಕ್ಕಿ ಬೆರೆಸಿ ಉಂಡೆಕಟ್ಟಿದ್ದು ಒಮ್ಮೆ ತಿಂದುನೋಡಿ.
  
ಸಿಹಿ ತಿಂದಮೇಲೆ ಕಾರಸೇವೆ ಅದರ ಹಿಂದೇನೆ ಬಂದಿದ್ದು ಹಸುವಿನ ಹಾಲು ಮತ್ತು ಕೊಬ್ಬರಿ ಹಾಲಿನೊಂದಿಗೆ ಅಕ್ಕಿಯನ್ನು ಬೇಯಿಸಿ ದ್ರಾಕ್ಷಿ ಗೋಡಂಬಿ ಏಲಕ್ಕಿ ಸಿಹಿ ಸೇರಿಸಿ ಮಾಡಿದ್ದ ಹಾಲು ಪಾಯಸ ಸಪ್ಪಗಿದೆಯೇನೋ ಅನ್ನುವಷ್ಟು ಸಿಹಿ. 
 ಅರೆ ಗೊಜ್ಜೇ ಮರೆತೆ... ಹುರಿದಜೀರಿಗೆ, ಕೊತ್ತಂಬರಿ, ಮೆಂತ್ಯದ ಪುಡಿಹುಣಿಸೇಹಣ್ಣು ಬೆಲ್ಲ, ಮಾವಿನಹಣ್ಣಿನ ಹೋಳಿನೊಂದಿಗೆ ಕುದಿಸಿ ಹಸಿಮೆಣಸಿನಕಾಯಿ, ಸಾಸಿವೆ ಒಗ್ಗರಣೆ ಹಾಕಿದ್ದ ಗೊಜ್ಜು ಒಮ್ಮೆ ಕೈ ಬೆರಳಿನಿಂದ ಅದ್ದಿ ನಾಕಿನೋಡಿ.
ಮಹಾಪ್ರಸಾದಕ್ಕೆ ಕುಳಿತವರಿಗೆಲ್ಲ ಒಬ್ಬರು ಗರಿಗರಿ ಹತ್ತು ರೂ ಹಾಗು ಮತ್ತೊಬ್ಬರು ಒಂದು ರೂ ನಾಣ್ಯ ದಕ್ಷಿಣೆಯಾಗಿ ಕೊಟ್ಟರು. ಕೊನೆಯಲ್ಲಿ ಅನ್ನ, ಒಬ್ಬರು ಮೊಸರು ಮತ್ತೊಬ್ಬರು ಮಜ್ಜಿಗೆ ಹಾಕಿಕೊಂಡು ಹೋದರು.
 ಉಪ್ಪು ಅಚ್ಹ ಮೆನಸಿನಪುಡಿಯಲ್ಲಿ ಚನ್ನಾಗಿ ನೆಂದ ಸಾಸಿವೆ ಇಂಗು ಪುಡಿ ಒಗ್ಗರಣೆ ಕೊಟ್ಟಿದ್ದ ಮಿಡಿ ಉಪ್ಪಿನಕಾಯಿ ಜೊತೆ  ಮೊಸರನ್ನ ತಿಂದಾದಮೇಲೆ ಮಹಾಪ್ರಸಾದವೆಂಬ ಅಮೃತ ಭೋಜನ ಕಾರ್ಯಕ್ರಮ ಪರಿಸಮಾಪ್ತಿ ಆಯಿತು .
     ಊಟದ ನಂತರ ಶ್ರೀಗಳಿಂದ ಸೇವಕರ್ತರಿಗೆಲ್ಲ ಪ್ರಸಾದವಿನಿಯೋಗ. 

ಹೇಗಿತ್ತು 
ಸ್ವಲ್ಪವಾದರೂ ಬಾಯಲ್ಲಿ ನೀರೂರಿದರೆ ನಾನು (ಬರೆದ ಬರಹ) ಬಡಿಸಿದ ಊಟ ಸಾರ್ಥಕ ನಿಮ್ಮ ಫೀಡ್ ಬ್ಯಾಕ್ ಗಾಗಿ ಎದುರು ನೋಡಿತ್ತಿರುವ 
  
ಇಂತಿ ನಿಮ್ಮ ಪ್ರೀತಿಯ
ವೆಂಕಟೇಶ ಮೂರ್ತಿ ಕೆ. ಎಸ್
(ಬಕಾಸುರನಲ್ಲ, ತಿಂಡಿಪೋತನಲ್ಲ,  ಬಾಯಿ ಚಪಲವಂತು ಕಂಡಿತ ಇಲ್ಲವೇ ಇಲ್ಲ. ಹೋದಲ್ಲೆಲ್ಲ ಸ್ಥಳೀಯ ಸಾಂಪ್ರದಾಯಕ ಊಟ ತಿಂಡಿಗಳನ್ನು ಮನಸಾರೆ  ಆಸ್ವಾದಿಸುವ  ಮಹಾನ್ ರಸಿಕ) 

 

No comments:

Total Pageviews