ಈಗ ನಾನು ಹೇಳ ಹೊರಟಿರುವುದು ಬಿಲ್ಲವರ
ಜನಾಂಗದಲ್ಲಿ ನಡೆಯುವ ಮದುವೆಯ ಶಾಸ್ತ್ರ ಸಂಪ್ರದಾಯದ , ಸಂಬ್ರಮದ ,ವಿವರ.
ನಮ್ಮ ಹುಡುಗನಿಗೆ ಒಂದು ಹೆಣ್ಣು ನೋಡಿ ಅಂತ
ಪರಿಚಯದವರಲ್ಲಿ ತಿಳಿಸಿರುತ್ತಾರೆ ,ನೋಡಿದವರು ಹುಡುಗಿಯ ಫೋಟೋ
ತಂದು ಕೊಡುತ್ತಾರೆ ಇಷ್ಟವಾದಲ್ಲಿ ಹುಡುಗಿಯ ಅಪ್ಪ ಅಮ್ಮನ ಬರಿ ಕೇಳುತ್ತಾರೆ (surname) ಸರಿಹೊಂದಿದಲ್ಲಿ ಹುಡುಗನ ತಂದೆ ತಾಯಿ
ಸೋದರಮಾಮ ಹೀಗೆ ಐದು ಜನ ಹುಡುಗಿ ನೋಡಲು
ಹೋಗುತ್ತಾರೆ. ಅಲ್ಲಿ ಉಪ್ಪು ಹಾಕಿ ಮಾಡಿರುವ ಯಾವುದೇ ಪದಾರ್ಥ ತಿನ್ನುವಹಾಗಿಲ್ಲ ಬರಿ ಚಹಾ ಅಥವಾ
ಶರಬತ್ತು. ಹುಡುಗಿ ಒಪ್ಪಿಗೆಯಾದಲ್ಲಿ ಒಮ್ಮೆ
ಹುಡುಗನನ್ನು ಕರೆದುಕೊಂಡು ಹೋಗುತ್ತಾರೆ ,ನಮಗೆ ಹುಡುಗಿ ಒಪ್ಪಿಗೆಯಾಗಿದೆ
ಹುಡುಗ ನಿಮಗೆ ಇಷ್ಟವಾದಲ್ಲಿ ಒಮ್ಮೆ ನಮ್ಮ ಮನೆಗೆ
ಬನ್ನಿ ಎಂದು ಆಹ್ವಾನಿಸುತ್ತಾರೆ. ಹುಡುಗನ ಮನೆಯಲ್ಲಿ ಮದುವೆಯ ಮಾತು ಕಥೆ , ಮದುವೆಯ ದಿನಾಂಕ ಗೊತ್ತು ಪಡಿಸುತ್ತಾರೆ ನಂತರ ಊಟ ಮಾಡಿ ಹೋಗುತ್ತಾರೆ. ಅಲ್ಲಿಗೆ ಸಂಭಂದ
ಗಟ್ಟಿಯಾದಂತೆ.
ನಿಶ್ಚಿತಾರ್ಥ ಹುಡುಗಿಯ ಮನೆಯಲ್ಲಿ , ಸುಮಾರು ಐವತ್ತು ಜನ ಹುಡುಗನ ಕಡೆಯಿಂದ ಹೋಗಿರುತ್ತಾರೆ.ವೀಳ್ಯದಎಲೆ ಅಡಿಕೆ ,ಉಂಗುರ ,ಸೀರೆ ,ಹೂ , ಹಣ್ಣುಗಳು ,ಮೇಕ್ ಅಪ್ ಕಿಟ್ ಹುಡುಗಿಗೆ ಕೊಂಡೊಯ್ಡಿರುತ್ತಾರೆ ಎರಡೂ ಕಡೆ ಹಿರಿಯರು ಚಾಪೆಮೇಲೆ ಕುಳಿತು
ಮಧ್ಯದಲ್ಲಿ ವೀಳ್ಯದಎಲೆ ಅಡಿಕೆ ಇಟ್ಟಿರುತ್ತಾರೆ
ಪರಸ್ಪರ ಎಲೆಅಡಿಕೆ ವಿನಿಮಯ ಮಾಡಿ ಕೊಂಡ ಮೇಲೆ ಅಡಿಕೆಯನ್ನು ಹೊಡೆಯುತ್ತಾರೆ , ಹೊಡೆಯುವಾಗ ಯಾವುದೇ ಕಾರಣಕ್ಕೂ ಮಾತು ತಪ್ಪುವುದಿಲ್ಲ ಅಂತ ಪ್ರಮಾಣ ಮಾಡುತ್ತಾರೆ. ಹುಡುಗನ ಕಡೆಯಿಂದ ಕೊಟ್ಟ ಸೀರೆ
ಉಟ್ಟು ಬಂದಮೇಲೆ ಉಂಗುರ ವಿನಿಮಯ ನಂತರ ಊಟಮಾಡಿ ಬರುತ್ತಾರೆ.
ಮುಂದೆ ಮದುವೆಯ ಸಂಬ್ರಮ , ಪತ್ರಿಕೆ ಕೊಡುವಾಗ ಸಂಭಂದಿಕರಿಗೆಲ್ಲ ಬಟ್ಟೆಬರೆಗಳ ಉಡುಗೊರೆ
ಮದುವೆ ಹಿಂದಿನ ದಿನ ಮೆಹಂದಿ ಶಾಸ್ತ್ರ. ಆದಿನ ಬೆಳಗ್ಗೆ ಬಳೆಗಾರ ಬರುತ್ತಾನೆ ಸಂಭಂದಿಕರ , ನೆರೆಹೊರೆಯವರ ಹೆಣ್ಣುಮಕ್ಕಳಿಗೆ ಬಳೆ ತೊಡಿಸುತ್ತಾರೆ.
ಮದುಮಗನಿಗೆ ಹೊಸ ಬಿಳಿ ಪಂಚೆ ಶಲ್ಯ ಉಡಿಸಿ ಅಕ್ಕನ ಗಂಡ 'ಭಾವ' ಕೈ ಹಿಡಿದು ಮನೆಯಿಂದ ಕರೆತಂದು ತುಳಸಿಗೆ ಮೂರು ಸುತ್ತು ಪ್ರದಕ್ಷಣೆ ಹಾಕಿಸಿ ಮಣೆಯ ಮೇಲೆ ಕೂಡಿಸುತ್ತಾರೆ.
ಮದುಮಗನ ಕೈಯಲ್ಲಿ ವೀಳ್ಯದ ಎಲೆ ಇಟ್ಟು ಪ್ರಥಮವಾಗಿ ಭಾವ ಮೆಹಂದಿಯನ್ನು ಇಡುತ್ತಾರೆ.( ಇದೆ ರೀತಿ ಮದುಮಗಳ ಮನೆಯಲ್ಲಿ ಹುಡುಗಿಯ ಸೋದರ ಅತ್ತೆ ಇಲ್ಲವಾದಲ್ಲಿ ನಾದಿನಿ ಮೊದಲು ಮೆಹಂದಿ ಇಡುವ ಶಾಸ್ತ್ರ.) ಸಂಭಂದಿಕರೆಲ್ಲಾ ಮೆಹಂದಿ ಇಟ್ಟಮೇಲೆ ಮುಂದಿನ ಕಾರ್ಯಕ್ರಮ "DANCE" ಎಲ್ಲರೂ ಸೇರಿ ನೃತ್ಯ ಮಾಡುತ್ತಾರೆ ಸುಮಾರು ಹನ್ನೆರಡು ಗಂಟೆಯವರೆಗೆ.
(ಹಿಂದೆ ಇಲ್ಲಿನ ಹರಿಕಥೆ ತರಹದ ಕಾರ್ಯಕ್ರಮ ಇರುತ್ತಿತ್ತಂತೆ ಈಗ ಬದಲಾಗಿದೆ)
ಮದುವೆಯದಿನ.
ಬೆಳಗ್ಗೆ ಮನೆಗೆ ಕ್ಷೌರಿಕ ಬರುತ್ತಾನೆ , ಅವನಿಂದ ಚಪ್ಪರದ ಒಳಗಿನ ಮೇಲ್ಬಾಗಕ್ಕೆ ಬಿಳಿ ಬಟ್ಟೆಯನ್ನು ಕಟ್ಟಿ ಅದಕ್ಕೆ ಮಾವಿನ ಎಲೆ ,ತೆಂಗಿನಕಾಯಿ ಕಟ್ಟಿಸುತ್ತಾರೆ (ಕೊಡಿ ಕಟ್ಟುವುದು). ಮದುಮಗನ ಅಮ್ಮ ಕೊಬ್ಬರಿ ಹಾಲು ,ಬೆಳ್ತಿಗೆ ಅಕ್ಕಿ ,ಬೆಲ್ಲ ,ಮೆಂತ್ಯ ಹಾಕಿ ಮಾಡಿದ ಪಾಯಸವನ್ನು ಮದುಮಗನಿಗೆ ತಿನ್ನಲು ಕೊಡುತ್ತಾರೆ. ನಂತರ ಮದುಮಗನಿಗೆ ಮಹೂರ್ತ ಇಡುವ ಕಾರ್ಯಕ್ರಮ , ಮತ್ತೆ ಮದುಮಗನ ಭಾವ ಕೈಹಿಡಿದು ತುಳಸಿಗೆ ಪ್ರದಕ್ಷಣೆ ಹಾಕಿಸಿ ಖುರ್ಚಿಯಲ್ಲಿ ಕೂಡಿಸುತ್ತಾರೆ ,ಹಿರಿಯರು ಎರಡು ತೆಂಗಿನಕಾಯಿಯನ್ನು ದೇವರಿಗೆ ಕಾಣಿಕೆ ಇಡುತ್ತಾರೆ.ಸೀಮೆ ದೇವರು , ಗ್ರಾಮ ದೇವರು ಮತ್ತು ಇಷ್ಟ ದೇವರಿಗೆ ಹರಿಕೆ ಹೇಳುತ್ತಾರೆ.
ಭಾವ ಮದುಮಗನ ಕಾಲಿಗೆ ಬೆಳ್ಳಿ ಉಂಗುರ ತೊಡಿಸುತ್ತಾರೆ
ನಂತರ ಕ್ಷೌರಿಕ ನಿಂದ ಮದುಮಗನಿಗೆ ಚೌಲದ ಶಾಸ್ತ್ರ.
ಅರಿಶಿನ ಹಚ್ಚುವ ಶಾಸ್ತ್ರ , ತೆಂಗಿನಹಾಲಿಗೆ ಅರಿಶಿನ ಬೆರಸಿ ಎಲ್ಲರೂ ಹಚ್ಚುತ್ತಾರೆ.ಮಂಗಳ ಸ್ನಾನದ ನಂತರ ಮದುವೆಮನೆಗೆ ತೆರಳುತ್ತಾರೆ.
ಮದುವೆಮನೆಯ ಅಂಗಳದಲ್ಲಿ ಇಬ್ಬರ ಕಡೆಯ ಸುಮಂಗಲಿಯರು ಪರಸ್ಪರ ಅರಿಶಿನ ಕುಂಕುಮ ಹೂಗಳ ವಿನಿಮಯಮಾಡಿಕೊಂಡು ಪನ್ನೀರನ್ನು ಪ್ರೋಕ್ಷಿಸಿದನಂತರ ಮದುಮಗಳನ್ನು ಹುಡುಗನ ಅಕ್ಕ ಕೈಹಿಡಿದು ಒಳಗೆ ಕರೆದುಕೊಂಡು ಹೋಗುತ್ತಾರೆ ಅಲ್ಲಿಯವರೆಗೂ ಮದುಮಗಳು ಛತ್ರದ ಒಳಗಡೆ ಹೋಗುವಂತಿಲ್ಲ ಹೊರಗಡೆಯೇ ಇರುತ್ತಾಳೆ.
ಮುಂದೆ ಮದುವೆಯ ಶಾಸ್ತ್ರ.
ಪುರೋಹಿತರ ಸಮಕ್ಷಮದಲ್ಲಿ ಇಬ್ಬರ ತಂದೆ ತಾಯಂದಿರು ಪೂಜೆಗೆ ಕೂರುತ್ತಾರೆ
ನಂತರ ಮದುಮಗನ ಅಕ್ಕ ಮದುಮಗಳನ್ನೂ ಭಾವ ಮದುಮಗನನ್ನು ಮದುವೆ ಮಂಟಪಕ್ಕೆ ಕರೆತರುತ್ತಾರೆ
ಹೂಮಾಲೆಯ ವಿನಿಮಯ
ಕನ್ಯಾದಾನ
ಮಾಂಗಲ್ಯ ಧಾರಣೆ
ಸಪ್ತಪದಿ
ನಾಗೋಲಿ ಶಾಸ್ತ್ರ
ತುಂಬಿದ ಸಭೆಗೆ ಮದುಮಕ್ಕಳಿಂದ ನಮಸ್ಕಾರ
ಸುಮಂಗಲಿಯರಿಂದ ಮದುಮಕ್ಕಳಿಗೆ ಆರತಿ
ಬೂಮದೂಟ ಕಾರ್ಯಕ್ರಮದಲ್ಲಿ ಮೊದಲಬಾರಿ ಮದುಮಗಳು ಮದುಮಗನಿಗೆ ಊಟ ಬಡಿಸಬೇಕು , ಅದಕ್ಕಾಗಿ ಮದುಮಗ ಮದುಮಗಳಿಗೆ ಏನಾದರೂ ಚಿನ್ನದ ಒಡವೆ ಕಾಣಿಕೆಯಾಗಿ ಕೊಡಬೇಕು. ಊಟದ ನಂತರ ಹೆಣ್ಣು ಒಪ್ಪಿಸಿಕೊಡುವ ಶಾಸ್ತ್ರ. ಮುಂದೆ ಮದುಮಗಳು ತವರು ಮನೆಗೆ ಹೋಗುತ್ತಾಳೆ , ಕೆಲವು ದಿನ ಬಿಟ್ಟು ಸೊಸೆಯನ್ನು ಕರೆದುಕೊಂಡು ಹೋಗಲಿಕ್ಕೆ ಬನ್ನಿ ಎಂದು ಆಹ್ವಾನಿಸುತ್ತಾರೆ , ಇತ್ತಕಡೆಯಿಂದ ಸುಮಾರು ಜನ ಅವರಮನೆಗೆ ಹೋಗುತ್ತಾರೆ , ಆದಿನದ ವಿಶೇಷ ಅತ್ತೆ ಮರ್ಯಾದಿ ಅಂತ ಬೀಗಿತ್ತಿಯರಿಂದ ತಮ್ಮ ಸೊಸೆ ಹಾಗು ಅಳಿಯನಿಗೆ ಕೈಲಾದಷ್ಟು ಚಿನ್ನಾಭರಣ ಉಡುಗೊರೆಯಾಗಿ ಕೊಡುತ್ತಾರೆ , ಊಟವಾದ ಮೇಲೆ ಮದುಮಗಳನ್ನು ಅತ್ತೆಮನೆಗೆ ಕರೆತರುತ್ತಾರೆ.
ಅಲ್ಲಿಗೆ ಎಲ್ಲಾ ಸಂಪ್ರದಾಯಗಳೂ ಮುಗಿಯುತ್ತದೆ ಅಲ್ಲಿಂದ ಮದುಮಕ್ಕಳ ಹೊಸ ಜೀವನ ಪ್ರಾರಂಭವಾಗುತ್ತದೆ.
(ಛತ್ರದಲ್ಲಿ ಮದುವೆ ಶಾಸ್ತ್ರ ನಡೆದದ್ದು ಕೇವಲ
ನಲವತ್ತೈದು ನಿಮಿಷ ಆರತಕ್ಷತೆ ಹೊರತುಪಡಿಸಿ.)
1 comment:
nice, good photo
Post a Comment